ಛತ್ತೀಸ್ ಗಡೀ

	ಪೂರ್ವೀ ಹಿಂದಿಯ ಒಂದು ಉಪಭಾಷೆ. ಇದನ್ನು ಲರಿಯಾ ಮತ್ತು ಖಲ್ಟಾಹೀ ಎಂದೂ ಕರೆಯುತ್ತಾರೆ. ಈ ಉಪಭಾಷೆಯನ್ನು ಉದಯಪುರ, ಕೊರ್ವ, ಸರ್ಗುಜ, ಜಶ್‍ಪುರ್, ಛೋಟಾ ನಾಗಪುರ್ ಮತ್ತು ಛತ್ತೀಸ್ ಗಡ್ ಹಾಗೂ ಅವುಗಳ ಸುತ್ತಮುತ್ತಲ ಪ್ರದೇಶಗಳಲ್ಲಿ ಮಾತನಾಡುತ್ತಾರೆ. ಈ ಭಾಷೆಯನ್ನು ಬಳಸುವವರ ಒಟ್ಟು ಸಂಖ್ಯೆ 37,55,343 (ಲಿಂ.ಸ. ಇಂ. 1904). ಈ ಸಂಖ್ಯೆ ಒರಿಸ್ಸ ಮತ್ತು ಅದರ ಅಕ್ಕಪಕ್ಕದ ಪ್ರದೇಶಗಳಿಗೆ ವಲಸೆ ಹೋಗಿರುವ ಜನರ ಸಂಖ್ಯೆಯನ್ನೂ ಒಳಗೊಂಡಿದೆ.

	ಛತ್ತೀಸ್‍ಗಡಿಯಲ್ಲದೆ, ಪೂರ್ವೀ ಹಿಂದಿ ಅವಧಿ ಮತ್ತು ಬಘೇಲೀ ಎಂಬ ಮತ್ತೆರಡು ಉಪಭಾಷೆಗಳನ್ನು ಹೊಂದಿದೆ. ಈ ಮೂರು ಉಪಭಾಷೆಗಳಿಗೆ ನಿಕಟ ಸಂಪರ್ಕವಿದ್ದರೆ, ಛತ್ತೀಸ್ ಗಡೀ ತನ್ನದೇ ಆದ ಲಕ್ಷಣಗಳನ್ನು ಹೊಂದಿದೆ. ಗ್ರಿಯರ್ಸನ್ನನ ಅಭಿಪ್ರಾಯದಲ್ಲಿ ಛತ್ತೀಸ್ ಗಡಿ ನೆರೆಯ ಮರಾಠಿ ಮತ್ತು ಒರಿಯ ಭಾಷೆಗಳ ಪ್ರಭಾವಕ್ಕೊಳಗಾಗಿ ಅನೇಕ ವ್ಯತ್ಯಾಸಗಳನ್ನು ಹೊಂದಿದ್ದರೂ ಅವಧಿ ಉಪಭಾಷೆಯೊಂದಿಗೆ ಅದಕ್ಕಿರುವ ನಿಕಟ ಸಂಪರ್ಕ ಸ್ಪಷ್ಟವಾಗಿದೆ.

	ಛತ್ತೀಸ್ ಗಡಿಯಲ್ಲಿ ಕೆಳಗೆ ಹೇಳಿರುವ ಉಪಭಾಷೆಗಳಿವೆ; ಸರ್ದೀ ಕೋರ್ವಾ, ಬೈಗಾನೀ, ಬಿನ್‍ಝ್ವಾರೀ, ಕಲರಿಗಾ, ಭುಲಿಯಾ. ಕೊನೆಯ ಎರಡು ಉಪಭಾಷೆಗಳನ್ನು ಮಾತ್ರ ಗ್ರಯರ್ಸನ್ನನ ಲಿಂಗ್ವಿಸ್ಟಿಕ್ ಸರ್ವೇ ಆಫ್ ಇಂಡಿಯ ಪ್ರಕಟಗೊಳ್ಳುವವರೆಗೂ ಛತ್ತೀಸ್ ಗಡಿಯ ಅಡಿಯಲ್ಲಿ ಸೇರಿಸಿರಲಿಲ್ಲ. ಅಲ್ಲದೆ ಹಲಬೀ, ಬಸ್ತರೀ, ಭುಂಜೆಯ ಮತ್ತು ಸದ್ರೀ ಕೊಲ್ ಎಂಬ ಛತ್ತೀಸ್‍ಗಡಿಗೆ ಸಂಬಂಧಿಸಿದವೆಂದು ನಂಬಲಾಗಿದ್ದ ನಾಲ್ಕು ಉಪಭಾಷೆಗಳು ಸಂಶೋಧನಾನಂತರ ಒರಿಯ ಮತ್ತು ಮರಾಠೀ ಭಾಷೆಗಳಿಗೆ ಸೇರಿದವುಗಳೆಂದು ತಿಳಿದುಬಂತು. ಛತ್ತೀಸ್‍ಗಡಿ ಪೂರ್ವೀ ಹಿಂದಿ ಭಾಷೆಯ ಧ್ವನಿ ನಿಯಮಗಳನ್ನು ಅನುಸರಿಸುತ್ತದೆ. ಆದರೂ ಮುಂದೆ ಹೇಳಿರುವ ಕೆಲವು ವೈಶಿಷ್ಟ್ಯಗಳನ್ನು ಕಾಣಬಹುದು. ಹರ್ ಎಂಬ ಪ್ರತ್ಯಯವನ್ನು ನಾಮಪದಕ್ಕೆ ಸೇರಿಸಿದಾಗ ಅದಕ್ಕೆ ಒಂದು ನಿರ್ದಿಷ್ಟವಾದ ಅರ್ಥ ಉಂಟಾಗುತ್ತದೆ. ಕೆಲವು ವೇಳೆ ಗುಣವಾಚಕ ಲಿಂಗಕ್ಕೆ ಅನುಗುಣವಾಗಿ ಬದಲಾಗುವುದಿಲ್ಲ. ಮನ್ ಎಂಬ ಪ್ರತ್ಯಯವನ್ನು ನಾಮ ಪ್ರಕೃತಿಗೆ ಸೇರಿಸಿದಾಗ ಅದು ಬಹುವಚನವಾಗುತ್ತದೆ. ಉದಾ : ಮನುಖ್ (ಮನುಷ್ಯ), ಮನುಖ್-ಮನ್ ಮನುಷ್ಯರು.

	ಛತ್ತೀಸ್‍ಗಡಿಯಲ್ಲಿ ಸಾಹಿತ್ಯ ರಚನೆಯಾಗಿಲ್ಲ. ಹಿಂದಿಯಲ್ಲಿರುವಂತೆ ಈ ಭಾಷೆಯಲ್ಲೂ ಆಡುಮಾತಿನಲ್ಲೇ ಉಳಿದುಕೊಂಡಿರುವ ಸತ್ಸಂಪ್ರದಾಯಗಳನ್ನು ಹೀರಾಲಾಲ್ ಮಹೋಪಾಧ್ಯಾಯ ಎಂಬುವರು ಈ ಭಾಷೆಗೆ ವ್ಯಾಕರಣವನ್ನು ಬರೆಯುವ ಸಂದರ್ಭದಲ್ಲಿ ಉಲ್ಲೇಖಸಿದ್ದಾರೆ.
(ಜೆ.ಎಚ್.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ